ಮಾರಿಷಸ್
ಹಿಂದೂ ಸಾಗರದಲ್ಲಿರುವ ಒಂದು ಸ್ವತಂತ್ರ ದ್ವೀಪ. ಮ್ಯಾಲಗಾಸೀ ದ್ವೀಪಕ್ಕೆ ಪೂರ್ವದಲ್ಲಿ 800 ಕಿಮೀ ದೂರದಲ್ಲೂ ಭಾರತದ ನೈರುತ್ಯಕ್ಕೆ 3,943 ಕಿ.ಮೀ ದೂರದಲ್ಲೂ  ಇರುವ ದ್ವೀಪ ಪೂರ್ವ ರೇಖಾಂಶ 57 33  ನಿಂದ ದಕ್ಷಿಣ  ಅಕ್ಷಾಂಶ 29 17ನಲ್ಲಿ ಇದೆ. ಮಾರಿಷಸ್‍ಗೆ ಪೂರ್ವದಲ್ಲಿ 563 ಕಿಮೀ ದೂರದಲ್ಲಿರುವ ರೋಡ್ರಿಗ್ಸ್ ದ್ವೀಪ. ಉತ್ತರದಲ್ಲಿ  933 ಕಿಮೀ ದೂರದಲ್ಲಿರುವ ಅಗಲೇಗ ದ್ವೀಪ ಮತ್ತು 402 ಕಿಮೀ ದೂರದಲ್ಲಿರುವ ಕಾರ್ಗಡಸ್ ಕರಜೋಸ್ ಸೋಲ್ಚ್ ದ್ವೀಪಗಳು ಇದರ ಆಡಳಿತಕ್ಕೆ ಸೇರಿವೆ. ಮಾರಿಷಸ್‍ನ ಉದ್ದ 61 ಕಿಮೀ, ಅಗಲ 47 ಕಿಮೀ, ಇದರ ಒಟ್ಟೂ ವಿಸ್ತೀರ್ಣ 1865 ಚಕಿಮೀ, ಸುಮಾರು 161 ಕಿಮೀ ಉದ್ದದ ಸಮುದ್ರ ತೀರವಿದೆ. ಜನಸಂಖ್ಯೆ 969,191 (1983) ರಾಜಧಾನಿ ಪೋರ್ಟ್‍ಲೂಯಿ. ಜನಸಂಖ್ಯೆ149,900 (1983).

ಮಾರಿಷಸ್ ಅಗ್ನಿಪರ್ವತ ಚಿಮ್ಮಿದ ಕಲ್ಲುಮಣ್ಣಿನಿಂದ ಹಾಗೂ ಲಾವಾರಸದಿಂದ ಮುಚ್ಚಿರುವ ದ್ವೀಪ, ಇಲ್ಲಿಯ ಭೂಮಿಯನ್ನು ಸುಮಾರು 51 ಸೆಂಟಿಮೀಟರ್ ದಪ್ಪ ಪದರದ ಲಾವಾರಸ ಆವರಿಸಿದೆ. ಇಲ್ಲಿಯ ರೈತರು ಭೂಮಿಯನ್ನು ಬೆಳೆಗೆ ಹದ ಮಾಡುವ ಮುನ್ನ  ಈ ಕಲ್ಲು ಮಣ್ಣು ಮತ್ತು ಲಾವಾರಸ ಪದರವನ್ನು ತೆಗೆದು ಅನಂತರ ಕೃಷಿಕಾರ್ಯ ಕೈಗೊಳ್ಳಬೇಕಾಗಿದೆ. ಈ ದ್ವೀಪದ ಮಧ್ಯಭಾಗ ಸಮುದ್ರ ಮಟ್ಟದಿಂದ ಸುಮಾರು 671 ಮೀಟರ್ ಎತ್ತರವಾಗಿದೆ. ಭೂಭಾಗದಲ್ಲಿ ವಾರ್ಷಿಕ ಸುಮಾರು 510 ಸೆಂಟಿಮೀಟರ್ ಮಳೆಯಾದರೆ ದ್ವೀಪದ ನೈರುತ್ಯ ಭಾಗದಲ್ಲಿ 89 ಸೆಂಮೀ ಮಳೆಯಾಗುತ್ತದೆ. ದ್ವೀಪದ ಉತ್ತರಭಾಗ ಸಮುದ್ರದ ಕಡೆಗೆ ಇಳಿಜಾರಾಗಿದ್ದು  ಪಶ್ಚಿಮ ಮತ್ತು ದಕ್ಷಿಣದಲ್ಲಿ  ಕಡಿದಾಗಿದೆ. ದ್ವೀಪದ ದಕ್ಷಿಣ ಭಾಗ ಬಿಟ್ಟು ಉಳಿದ 3 ಕಡೆ  ಹವಳ ದಿಬ್ಬಗಳು ಸುತ್ತುವರಿದಿದೆ.

ನವೆಂಬರ್‍ನಿಂದ ಏಪ್ರಿಲ್ ತನಕ ಬೇಸಗೆ ಕಾಲ, ಆಗ 26 ಸೆಂಟಿಗ್ರೇಡ್‍ವರೆಗೂ ಉಷ್ಣತೆ ಇರುತ್ತದೆ. ಆಗ್ನೇಯ ಮಾರುತಗಳು  ದ್ವೀಪಕ್ಕೆ ಹೆಚ್ಚು ಮಳೆ ತರುತ್ತವೆ, ಆಗಾಗ ಬಿರುಗಾಳಿ ಬೀಸುವುದುಂಟು, ಬೇಸಗೆ ಕಾಲದಲ್ಲೇ ಇಲ್ಲಿ ಹೆಚ್ಚು ಮಳೆ ಬೀಳುತ್ತದೆ. ಜೂನ್ ನಿಂದ ಅಕ್ಟೋಬರ್ ತನಕ ಚಳಿಗಾಲವಾಗಿದ್ದು  22ಛಿ ಉಷ್ಣತೆ ಇರುತ್ತದೆ.

ಈ ದ್ವೀಪ ಕಬ್ಬಿನಬೆಳೆಗೆ ಹಾಗೂ ಸಕ್ಕರೆ ಉತ್ಪಾದನೆಗೆ ಪ್ರಸಿದ್ಧ ಕಬ್ಬು ಇಲ್ಲಿಯ ಮುಖ್ಯ ಬೆಳೆ, 1983ರಲ್ಲಿ ಸುಮಾರು 85,000 ಹೆಕ್ಟೇರ್ ಭೂಪ್ರದೇಶದಲ್ಲಿ ಕಬ್ಬನ್ನು ಬೆಳೆಯಲಾಗಿತ್ತು, ಟೀ ಎರಡನೇ ಮುಖ್ಯ ಬೆಳೆ, ದ್ವೀಪದಲ್ಲಿ 21 ಕಬ್ಬು ಅರೆಯುವ ಕಾರ್ಖಾನೆಗಳಿದ್ದು  558,000 ಟನ್ನು ಬೂರಾ ಸಕ್ಕರೆಯನ್ನೂ, 52,975 ಟನ್ನು ಸಕ್ಕರೆಯನ್ನೂ ಉತ್ಪಾದಿಸಲಾಗಿತ್ತು. 61.42 ಟನ್ನು ಟೀಯನ್ನೂ, 800 ಟನ್ನು ಹೊಗೆಸೊಪ್ಪನ್ನೂ, 15000 ಟನ್ನು ಆಲೂಗಡ್ಡೆಯನ್ನೂ, 1684 ಟನ್ನು ಈರುಳ್ಳಿಯನ್ನು ಬೆಳೆಯಲಾಗಿತ್ತು. ಆಹಾರ ಪದಾರ್ಥಗಳಾದ ಅಕ್ಕಿ, ಗೋದಿಹಿಟ್ಟು, ಮಾಂಸ ಮತ್ತು ವಿವಿಧ ಧಾನ್ಯಗಳನ್ನು ಇಡೀ ದ್ವೀಪಕ್ಕೆ ಸಾಕಾಗುವಷ್ಟು ಹೊರಗಿನಿಂದಲೇ ತರಿಸಬೇಕಾಗಿದೆ.  ದನ, ಕರು, ಮೇಕೆ ಕೋಳಿ ಇವುಗಳ ಸಾಕಣೆ ಇದೆ.  ಒಟ್ಟೂ 21,005 ಹೆಕ್ಟೇರುಗಳಷ್ಟು ಅರಣ್ಯ ಪ್ರದೇಶವಿದೆ.
ದ್ವೀಪದ ಮುಖ್ಯ ಕೈಗಾರಿಕೆ ಸಕ್ಕರೆ ತಯಾರಿಕೆ,  ಟೀ, ವಜ್ರ ಕತ್ತರಿಸುವದು, ಬಟ್ಟೆ, ಗೊಬ್ಬರ ಕೈಗಡಿಯಾರಗಳ ಕೈಪಟ್ಟಿ ತಯಾರಿಕೆ ಮುಂತಾದವು ಇದೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿದ್ದು 1983ರಲ್ಲಿ 123.820ಮಂದಿ ಪ್ರವಾಸಿಗರು  ದ್ವೀಪಕ್ಕೆ ಭೇಟಿ ಇತ್ತಿದ್ದರು.

ಮಾರಿಷಸ್ ದ್ವೀಪದಲ್ಲಿ 842 ಕಿಮೀ ದೂರದ (1983) ಮುಖ್ಯ ರಸ್ತೆಗಳಿದ್ದವು. 581 ಕಿಮೀ ಪಟ್ಟಣಗಳ 420 ಕಿಮೀ. ಗ್ರಾಮಾಂತರ ರಸ್ತೆಗಳು ಇದ್ದವು. ದ್ವೀಪದಲ್ಲಿ ಅಂತರಾಷ್ಟೀಯ ವಿಮಾನ ನಿಲ್ದಾಣವಿದ್ದು ಇಲ್ಲಿಂದ ಯುರೋಫ್, ಆಫ್ರಿಕ, ಏಷ್ಯ, ಆಸ್ಟ್ರೇಲಿಯ ಮುಂತಾದ ಕಡೆಗಳಿಗೆ  ವಿಮಾನ ಸಂಪರ್ಕವಿದೆ. ಪೋಟಲೂಯಿ ಒಂದು ಉತ್ತಮ ಬಂದರು. ಇಲ್ಲಿ ವಿದೇಶಗಳ ಹಡಗುಗಳು ಬಂದು  ನಿಲ್ಲುತ್ತವೆ. ವಿದ್ಯುತ್, ದೂರವಾಣಿ, ದೂರದರ್ಶನ ಹಾಗೂ ಅಂಚೆ ಸೌಕರ್ಯಗಳಿವೆ. ಸುದ್ದಿಪತ್ರಿಕೆಗಳಿವೆ, ದ್ವೀಪದಲ್ಲಿರುವ ಜನರಲ್ಲಿ ಹೆಚ್ಚು ಮಂದಿ ಹಿಂದುಗಳು, ಅನಂತರ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಬರುತ್ತಾರೆ,  ದ್ವೀಪದಲ್ಲಿ ಉಚಿತ ಪ್ರಾಥಮಿಕ ಶಿಕ್ಷಣವಿದೆ. ಆದರೆ ನಿರ್ಭಂಧವಿಲ್ಲ.  ಉಪಾಧ್ಯಾಯರ ತರಬೇತಿ ಕಾಲೇಜು, ತಾಂತ್ರಿಕ ವಿದ್ಯಾಲಯ, ಮಹಾತ್ಮಾಗಾಂಧಿ ವಿದ್ಯಾಸಂಸ್ಥೆ ಮುಂತಾದವು ಇದ್ದು ಶಿಕ್ಷಣಕ್ಕೆ ಅನುಕೂಲವಿದೆ. 1983ರಲ್ಲಿ ಈ ದ್ವೀಪದಲ್ಲಿ ಒಟ್ಟು 690 ಮಂದಿ ವೈದ್ಯರಿದ್ದು 2841  ಹಾಸಿಗೆಗಳುಳ್ಳ  ಆಸ್ಪತ್ರೆಗಳ ಸೌಲಭ್ಯವಿತ್ತು.

ಮಾರಿಷಸ್ ಪ್ರಜಾಪ್ರಭುತ್ವ ಸರ್ಕಾರದ ಆಡಳಿತಕ್ಕೆ ಸೇರಿದೆ. 18 ಮಂದಿ ಸದಸ್ಯರುಳ್ಳ  ಮಂತ್ರಿಮಂಡಲ, ಪ್ರಧಾನಮಂತ್ರಿ ಇದರ ಅಧ್ಯಕ್ಷತೆ ವಹಿಸುತ್ತಾನೆ. ಪ್ರಧಾನ ಮಂತ್ರಿಯ ಸಲಹೆಯ ಮೇಲೆ ಗವರ್ನರ್ ಜನರಲ್ 10 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುತ್ತಾನೆ.  ಐದು ವರ್ಷಗಳಿಗೊಮ್ಮೆ ನಡೆಯುವ ವಯಸ್ಕ ಮತದಾನದ ಮೂಲಕ ಚುನಾಯಿತರಾದ 62 ಮಂದಿ ಸದಸ್ಯರೂ ಧಾರ್ಮಿಕ ಕ್ಷೇತ್ರಗಳಿಂದ  ಆಯ್ದ 8 ಮಂದಿ ಸದಸ್ಯರೂ ಸಂಸತ್ತಿನಲ್ಲಿ ಇರುತ್ತಾರೆ. ಇವರೇ ಅಧ್ಯಕ್ಷನನ್ನೂ ಆಯ್ಕೆ ಮಾಡುತ್ತಾರೆ. ಸರ್ಕಾರದಲ್ಲಿ ಕಾರ್ಯಾಗ, ನ್ಯಾಯಾಂಗ ಮತ್ತು ಆಡಳಿತಾಂಗಗಳಿರುವುದರ ಜೊತೆಗೆ ಓಂಬುಡ್ಸ್‍ಮನ್ (1970 ರಿಂದ) ನೇಮಕವೂ ಇದ್ದು ಪ್ರಜೆಗಳ ಮೂಲಭೂತ ಹಕ್ಕುಗಳ ಮತ್ತು ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಬಗ್ಗೆ ಯುಕ್ತ ಕ್ರಮ ತೆಗೆದುಕೊಳ್ಳಲಾಗಿದೆ. 

ಮಾರಿಷಸ್ ದ್ವೀಪ ಇರುವ ಅರಬ್ಬ್ ವರ್ತಕರಿಗೆ ಮೊದಲೇ ತಿಳಿದಿತ್ತು. ಆದರೆ ಯುರೋಪಿಯನ್ನವರಲ್ಲಿ ದ್ವೀಪಕ್ಕೆ ಮೊದಲು ಕಾಲಿಟ್ಟವರು ಪೋರ್ಚುಗೀಸರು, 1500ರಲ್ಲಿ ಅವರು ತಮ್ಮ ಹಡಗುಗಳಿಗೆ ಆಹಾರ, ನೀರು ತುಂಬಿಕೊಳ್ಳಲು ಇಲ್ಲಿ ನಿಲ್ಲುತ್ತಿದ್ದರು. ಆದರೆ ಇಲ್ಲಿ ನೆಲೆ ನಿಲ್ಲಲಿಲ್ಲ, 1598ರಲ್ಲಿ ಡಚ್ಚರು ಈ ದ್ವೀಪ ತಮಗೆ ಸೇರಿದ್ದೆಂದು  ಘೋಷಿಸಿ ಅವರ ದೊರೆ ನಾಸೋವಿನ ಮಾರಿಸ್ ನೆನಪಲ್ಲಿ ದ್ವೀಪಕ್ಕೆ ಹೆಸರಿಟ್ಟರು. ಅನಂತರ ಇವರು ಮಡಗಾಸ್ಕರ್‍ನಿಂದ (ಇಂದಿನ ಮ್ಯಾಲಗಾಸಿ) ಜೀತದಾಳುಗಳನ್ನು ತಂದು ಕಾಡು ಕಡಿಸಿ ನೆಲಸಿದರು. ಆದರೆ 1710ರಲ್ಲಿ ಅಲ್ಲಿಂದ ಕಾಲ್ತೆಗೆದರು. 1715ರಲ್ಲಿ ಫ್ರೆಂಚರು ಈ ದ್ವೀಪಕ್ಕೆ ಬಂದು ನೆಲಸಿ ಕೋಟೆ ಕಟ್ಟಿ ಕಾಫಿ ಹಣ್ಣುಗಳು, ಕಬ್ಬು ಮುಂತಾದವುಗಳನ್ನು ಬೆಳೆಯಲಾರಂಬಿಸಿದರು. ಮುಂದೆ ಬ್ರಿಟಿಷರಿಗೂ, ಫ್ರೆಂಚರಿಗೂ ಕದನವಾಗಿ ಬ್ರಿಟಿಷರು 1810ರಲ್ಲಿ  ಈ ದ್ವೀಪವನ್ನು ಆಕ್ರಮಿಸಿಕೊಂಡು ತಮ್ಮ ವಸಾಹತನ್ನಾಗಿ ಮಾಡಿಕೊಂಡರು. 

1833ರಲ್ಲಿ ಬ್ರಿಟಿಷರು ಗುಲಾಮಗಿರಿಯನ್ನು ನಿಷೇಧಿಸಿದರು. ಇದರ ಪರಿಣಾಮವಾಗಿ  ಈ ದ್ವೀಪದಲ್ಲಿ ಸುಮಾರು 7500 ಕ್ಕೂ ಹೆಚ್ಚು ಗುಲಾಮರು ಸ್ವತಂತ್ರರಾದರು. ಇವರು ಕಬ್ಬು ಗದ್ದೆಗಳಲ್ಲಿ ಮತ್ತೆ ಗುಲಾಮರಂತೆ ದುಡಿಯಲು ಒಪ್ಪಲಿಲ್ಲ. ಇದರಿಂದಾಗಿ ಸುಮಾರು 4,50,000 ಭಾರತೀಯ ಕೆಲಸಗಾರರನ್ನು 1835 ರಿಂದ 1907 ರ  ಅಂತರದಲ್ಲಿ ಈ ದ್ವೀಪಕ್ಕೆ ಬ್ರಿಟಿಷರು ತಮ್ಮ ಗದ್ದೆ, ತೋಟಗಳಲ್ಲಿ ದುಡಿಯಲು ಕರೆತಂದರು, 1950ರಲ್ಲಿ ಮಾರಿಷಸ್ ಸ್ವಯಮಧಿಕಾರದತ್ತ  ನಡೆದು 1968 ರ ಮಾರ್ಚ್ 12 ರಂದು ಪೂರ್ಣ ಸ್ವತಂತ್ರವಾಯಿತು. 
ಮಾರಿಷಸ್  ಬ್ರಿಟಿಷ್ ಕಾಮನ್‍ವೆಲ್ತ್‍ನ ಒಂದು ಸ್ವತಂತ್ರ ರಾಷ್ಟ್ರ ಹಾಗೂ 1968 ಏಪ್ರೀಲ್ 24 ರಂದು ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ